
ಬೆಂಗಳೂರು: ಖ್ಯಾತ ಗೀತ ಸಾಹಿತಿ, ಸಾಹಿತಿ, ಕವಿ ಕಥೆಗಾರ, ಸಂಭಾಷಣಕಾರ ಎಚ್ಎಸ್ ವೆಂಕಟೇಶ್ಮೂರ್ತಿ (HS Venkateshamurthy) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. 80 ವರ್ಷದ ಎಚ್.ಎಸ್ ವೆಂಕಟೇಶ್ ಮೂರ್ತಿ ಅವರ ನಿಧನಕ್ಕೆ ಚಿತ್ರರಂಗ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎಚ್.ಎಸ್ ವೆಂಕಟೇಶ್ ಮೂರ್ತಿ ಅವರು 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದ ಎಚ್.ಎಸ್ ವೆಂಕಟೇಶ್ ಮೂರ್ತಿ ಅವರು ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕ ಆದರು. 2000ರಲ್ಲಿ ಅವರು ನಿವೃತ್ತಿ ಹೊಂದಿದರು.
ಕನ್ನಡ ಚಿತ್ರರಂಗಕ್ಕೆ ಎಚ್.ಎಸ್ ವೆಂಕಟೇಶ್ ಅವರ ಕೊಡುಗೆ
ಎಚ್.ಎಸ್ ವೆಂಕಟೇಶ್ ಮೂರ್ತಿ ಅವರು ಕೇವಲ ಸಾಹಿತಿ ಅಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿ ಪಡದ ʼಚಿನ್ನಾರಿ ಮುತ್ತʼ ಕಥೆ, ಸಂಭಾಷಣೆ ಹಾಗು ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿದ್ದಾರೆ. ೧೯೯೭ರಲ್ಲಿ ತೆರೆಕಂಡ ‘ಅಮೆರಿಕ ಅಮೆರಿಕ’ ಚಿತ್ರದ ‘ಬಾನಲ್ಲಿ ಓಡೋ ಮೋಡ..’ ಹಾಡು ಕೂಡ ಇವರೇ ಬರೆದಿದ್ದು. ಪುನೀತ್ ನಟನೆಯ ‘ಮೈತ್ರಿ’ ಚಿತ್ರಕ್ಕೆ ಹಾಡು ಹಾಗು ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ‘ತೂಗು ಮಂಚದಲ್ಲಿ ಕೂತು..’ ಇವರೇ ಬರೆದಿದ್ದು. ಟಿ.ಎನ್ ಸೀತಾರಾಮ್ ಅವರ ‘ಮುಕ್ತ’ ಧಾರಾವಾಹಿಯ ಟೈಟಲ್ ಸಾಂಗ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದನ್ನು ವೆಂಕಟೇಶ ಮೂರ್ತಿ ಅವರೇ ರಚಿಸಿದ್ದಾರೆ.